ಟ್ಯಾಮರಿಕ್ಸ್
ಟ್ಯಾಮರಿಕೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದು ಗಾಳಿಮರದಂತೆ (ಕ್ಯಾಸ್ಯುರೈನ) ಕಾಣುತ್ತದೆ. ಸುಂದರವಾದ ಹೂಗಳನ್ನು ಬಿಡುವುದರಿಂದ ಇದನ್ನು ಅಲಂಕಾರಸಸ್ಯವಾಗಿ ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತೋಟಗಳ ಸುತ್ತ ಗಾಳಿಯನ್ನು ತಡೆಯುವುದಕ್ಕೆಂದು ಬೆಳೆಸುವುದೂ ಉಂಟು. ಇದರ ಚೌಬೀನೆ ಗಟ್ಟಿಯಾಗಿರುವುದರಿಂದ ಮನೆ ಕಟ್ಟಲು ಮತ್ತು ಇತರ ಮರದ ಸಾಮಗ್ರಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರಿಂದ ಇದ್ದಿಲನ್ನೂ ತಯಾರಿಸುವರು. ಇದಕ್ಕೆ ಔಷಧೀಯ ಪ್ರಾಮುಖ್ಯವೂ ಉಂಟು.

	ಟ್ಯಾಮರಿಕ್ಸ್ ಜಾತಿಯಲ್ಲಿ ಸುಮಾರು 75 ಪ್ರಭೇದಗಳಿವೆ. ಇವುಗಳಲ್ಲಿ ಹೆಚ್ಚಿನವು ಪರ್ಣಪಾತಿ ಪೊದೆಗಳು ಅಥವಾ ಸಣ್ಣಮರಗಳು. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವಕ್ಕೆ ತೊಟ್ಟು ಇಲ್ಲ. ಬುಡದಲ್ಲಿ ಪೊರೆಯಂಥ ಶಲ್ಕ ಉಂಟು. ಹೂಗಳು ಚಿಕ್ಕವು. ಹೂತೊಟ್ಟು ಚಿಕ್ಕದಾಗಿರಬಹುದು ಅಥವಾ ಇರುವುದೇ ಇಲ್ಲ. ಪುಷ್ಪಪತ್ರಗಳು ಮತ್ತು ದಳಗಳು 4-5. ಕೇಸರಗಳು ಸಾಮಾನ್ಯವಾಗಿ 4-5; ಅಪರೂಪವಾಗಿ 8-12 ಇರುತ್ತವೆ. ಕೆಲವು ಸಲ ಕೇಸರಗಳು ಬುಡದಲ್ಲಿ ಕೂಡಿಕೊಂಡಿರುವುದುಂಟು. ಅಂಡಾಶಯ ಒಂದು ಕೋಶದ್ದು. ಬುಡಭಾಗದಲ್ಲಿ 5-10 ಹಾಲೆಗಳುಳ್ಳ ಪಾಲಿಯಾಗಿರುವ ತಟ್ಟೆ ಇದೆ. ಶಲಾಕೆಗಳು 2-5. ಫಲ ಸಂಪುಟ ಮಾದರಿಯದು. 3-5 ಭಾಗಗಳಾಗಿ ಒಡೆದುಕೊಳ್ಳುತ್ತದೆ. ಬೀಜಗಳು ಅಸಂಖ್ಯ ; ಬಹಳ ಸಣ್ಣಗಿವೆ. ಬೀಜಗಳ ತುದಿಯಲ್ಲಿ ಕೂದಲುಗಳುಂಟು.

	ಪಾರ್ವಿಫ್ಲೋರ, ಟೆಟ್ರಾಂಡ್ರ, ಜ್ಯೂನಿಪರಿನ, ಪೆಂಟಾಂಡ್ರ, ಚೈನೆನ್ಸಿಸ್, ಗ್ಯಾಲಿಕ, ಹಿಸ್ಪಿಡ, ಏಫಿಲ ಮತ್ತು ಆಫ್ರಿಕಾನ ಎಂಬುವು ಟ್ಯಾಮರಿಕಿನ ಮುಖ್ಯ ಪ್ರಭೇದಗಳು. ಇವನ್ನು ಬೀಜ ಮತ್ತು ಕಾಂಡ ತುಂಡುಗಳಿಂದ ವೃದ್ಧಿಮಾಡಬಹುದು. ಕಾಂಡದ ತುಂಡುಗಳಿಂದ ವೃದ್ಧಿಮಾಡುವುದು ಹೆಚ್ಚು ರೂಢಿಯಲ್ಲಿರುವ ಕ್ರಮ. ಇವುಗಳ ಬೆಳೆವಣಿಗೆಗೆ ಒಣ ಹವೆ ಉತ್ತಮ. ಇವನ್ನು ಮರಳು, ಚೌಳು ಮತ್ತು ಕ್ಷಾರಭೂಮಿಗಳಲ್ಲಿ ಬೆಳೆಯಬಹುದು.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ